ಸ್ಯಾಪಿಂಡೇಸೀ ಕುಟುಂಬದ ಲಿಚ್ಚಿ ಚೈನೆನ್ಸಿಸ್ ಎಂಬ ಅಚ್ಚಹಸುರಿನ ಸಸ್ಯ. 10-15 ಮೀ ಎತ್ತರಕ್ಕೆ ಬೆಳೆಯುತ್ತದೆ. ಹುಟ್ಟೂರು ದಕ್ಷಿಣ ಚೀನ. ಸಂಯುಕ್ತ ಮಾದರಿಯ ಎಲೆಗಳು, ಮರಿ ಎಲೆಗಳು 2-4 ಜೊತೆಗಳ ಲ್ಲಿರುತ್ತವೆ. ಇವುಗಳಿಗೆ ಬರ್ಜಿ ಆಕಾರವಿದೆ. ಸಂಯುಕ್ತ ಎಲೆಗಳ ಉದ್ದ 5-7 ಸೆಂಮೀ. ಹೂಗೊಂಚಲುಗಳಿಗೆ ಸಂಕೀರ್ಣಪುಷ್ಪಗುಚ್ಛಗಳೆಂದು (ಪ್ಯಾನಿಕಲ್) ಹೆಸರು. 10-20 ಹಣ್ಣುಗಳು ಒಟ್ಟಿಗೆ ಗುಂಪಾಗಿ ಒಂದೇ ಗೊಂಚಲಿನಲ್ಲಿರುತ್ತವೆ. ಹಣ್ಣುಗಳ ಆಕಾರ ಗುಂಡಗೆ ಅಥವಾ ಮೊಟ್ಟೆಯಂತೆ. 2.5 ಮಿಮೀ ವ್ಯಾಸ. ಬಣ್ಣ ತಿಳಿಗೆಂಪು. ಹಣ್ಣಿನ ಹೊರಭಾಗ ಗಟ್ಟಿ, ಗುಳಬೆಳ್ಳಗೆ ಮತ್ತು ರಸಭರಿತ ಭಾಗ. ನಡುವಿನಲ್ಲಿ ಒಂದು ಬೀಜವಿದೆ. ಹಣ್ಣಿಗೆ ಆಮ್ಲೀಯ ವಾಸನೆ ಉಂಟು. ಈ ರಸಭರಿತ ಹಣ್ಣುಗಳನ್ನು ಹಸಿಯಾಗಿ ತಿನ್ನಬಹುದು. ಇವನ್ನು ವರ್ಷಗಳ ಕಾಲ ಕ್ಯಾನಿಂಗ್ ವಿಧಾನದಲ್ಲಿ ಕೆಡದಂತೆ ಶೇಖರಿಸಿಟ್ಟುಕೊಳ್ಳಲೂಬಹುದು. ಹೀಗೆ ಶೇಖರಿಸಿಟ್ಟಂಥವು ಹೆಚ್ಚು ರುಚಿ. ಹಣ್ಣುಗಳನ್ನು ಸಂಸ್ಕರಿಸಿ ಒಣಗಿಸಿ ಸಹ ತಿನ್ನಬಹುದಾಗಿದೆ.

17ನೆಯ ಶತಮಾನದ ಕೊನೆಯ ವೇಳೆಗೆ ಇದನ್ನು ಜಮೈಕದಲ್ಲಿ ಆಹಾರವಾಗಿ ಬಳಸುತ್ತಿದ್ದರು. ಮುಂದೆ 1906ರ ವೇಳೆಗೆ ಫ್ಲಾರಿಡದಲ್ಲಿ ಯಥೇಚ್ಛವಾಗಿ ಬೆಳೆಸುತ್ತಿದ್ದರು. ಇದೀಗ ದಕ್ಷಿಣ ಆಫ್ರಿಕ, ಭಾರತದ ವಿವಿಧ ಪ್ರದೇಶಗಳಲ್ಲಿ ಮತ್ತು ಹವಾಯ್ ದ್ವೀಪಗಳಲ್ಲಿ ಬೆಳೆಸಲಾಗುತ್ತಿದೆ. ಲಿಚ್ಚಿ ಹಣ್ಣಿನ ಮರಗಳನ್ನು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಸಹ ಬೆಳೆಸಿದ್ದಾರೆ. ಸಸ್ಯವೃದ್ಧಿಗೆ ಬೀಜಗಳನ್ನು ಸಸ್ಯವಾಟಿಯಲ್ಲಿ (ನರ್ಸರಿ) ಹುಟ್ಟುಹಾಕುತ್ತಾರೆ, ಜೊತೆಗೆ ಗೂಟನೆಡುವ ವಿಧಾನವನ್ನು ಕೂಡ ಅನುಸರಿಸುತ್ತಾರೆ. ಲಿಚ್ಚಿ ಸಸಿಗಳ ನಡುವೆ 7.5-10.8 ಮೀ ಅಂತರವಿರಬೇಕು. ಅವು ಸಾಮಾನ್ಯವಾಗಿ 3-5 ವರ್ಷಗಳಲ್ಲಿ ಹಣ್ಣು ಕೊಡಲು ತೊಡಗುತ್ತವೆ.	
	
(ಟಿ.ಎಮ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ